ಬೇಲಿಸ್, ಡಬ್ಲ್ಯು ಎಂ
1860-1924. ಇಂಗ್ಲೆಂಡಿನ ಅಂಗಕ್ರಿಯಾವಿಜ್ಞಾನಿ. ಜನನ 2.5.1860. ವೂಲ್ವರ್ ಹ್ಯಾಪ್ಟನ್; ಮರಣ 27-8-1924, ಡ್ಯಾಮ್ ಸ್ಟಡ್. 1888ರಲ್ಲಿ ಲಂಡನ್ನಿನ ಯೂನಿವರ್ಸಿಟಿ ಕಾಲೇಜನ್ನು ಅಂಗಕ್ರಿಯಾ ವಿಜ್ಞಾನದ ಪ್ರಾಧ್ಯಾಪಕನಾಗಿ ಸೇರಿ ಅಲ್ಲಿಯ ಪ್ರಯೋಗ ಮಂದಿರದಲ್ಲಿ ಅದೇ ವಿಷಯದಲ್ಲಿ ಸಂಶೋಧನೆ ಕೈಗೊಂಡ. ಬೇಲಿಸ್ ಕೈಗೊಂಡ ಪ್ರಮುಖ ಸಂಶೋಧನೆಗಳೆಂದರೆ; ಹೃದಯದ ವಿದ್ಯುತ್ ಚಲನೆ, ಆಂತರಿಕಾಂಗಗಳಲ್ಲಿ ನರ ಸಂಬಂಧ ಮತ್ತು ರಕ್ತ ಪರಿಚಲನೆ. ಈತ ಅರ್ನೆಸ್ಟ್ ಸ್ಟಾರ್‍ಲಿಂಗನ ಸಹಚರಿಯಾಗಿ ಮೇದೋಜೀರಕಾಂಗ ಉತ್ಪತ್ತಿ ಮಾಡುವ ಜೀರ್ಣರಸವನ್ನು ಪ್ರಚೋದಿಸುವ ಸೆಕ್ರಿಟಿನ್ ಎಂಬ ಹಾರ್ಮೋನನ್ನು ಆವಿಷ್ಕರಿಸಿದ. ಹೊಟ್ಟೆಯಲ್ಲಿ ಅರ್ಧಪಚನವಾದ ಆಹಾರ ಡಿಯೋಡಿನಮಿಗೆ ಬಂದಾಗ ಅಲ್ಲಿ ಸೆಕ್ರಿಟಿನ್ ಎನ್ನುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಅಲ್ಲಿಯೇ ಅದು ರಕ್ತಗತವಾಗಿ ಶಕ್ತಿ ಪರಿಚಲನಾಕ್ರಮದಿಂದ ಮೇದೋಜೀರಕಾಂಗಕ್ಕೆ ತಲಪಿ ಅಲ್ಲಿ ರಸೋತ್ಪಾದನೆ ಮಾಡುತ್ತದೆ.  							                                      
 (ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ